ಸರ್ವರೋಗ ಪರಿಹಾರಕ: ವೈದ್ಯನಾಥ ಸ್ವಾಮಿ
![]() | ||
|
ಕುಜ ದೋಷಕ್ಕೆ, ವಿವಾಹ ಸಂಬಂಧಿತ ಸಮಸ್ಯೆಗಳಿಗೆ ಮತ್ತು ಆಸ್ತಿಗೆ ಸಂಬಂಧಿಸಿದ ತೊಂದರೆಗಳಿಗೆ ಇದು ಸಿದ್ಧ ಕ್ಷೇತ್ರವಾಗಿದೆ. ಇಲ್ಲಿ ಮುರುಗ (ಷಣ್ಮುಖ)ನು ಪುತ್ರ ಭಾಗ್ಯ ಕರುಣಿಸುತ್ತಾನೆ. ತಯ್ಯಲ್‌ನಾಯಕಿ ಅಮ್ಮ ಸುಮಂಗಲಿಯರ ಔನ್ನತ್ಯಕ್ಕೆ ಕಾರಕಳಾಗಿರುತ್ತಾಳೆ.
ಈ ಕ್ಷೇತ್ರದಲ್ಲಿ ಒಂದೇ ಸಾಲಿನಲ್ಲಿ ಎಲ್ಲಾ ನವಗ್ರಹರೂ ನಿಂತಿರುವಂತಹ ವಿಗ್ರಹಗಳಿವೆ. ಆದುದರಿಂದ ಸರ್ವ ಗ್ರಹ ದೋಷವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆ.
ಬಿಲ್ವ, ಶ್ರೀಗಂಧ ಮತ್ತು ವಿಭೂತಿಯ ಮಿಶ್ರಣದ ಮೂಲಕ ದೇವರು ಎಲ್ಲ ರೋಗಗಳನ್ನೂ ಪರಿಹರಿಸುತ್ತಾನೆ. ಈ ಸ್ಥಳದಲ್ಲಿ ಎಲ್ಲಾ ನಾಲ್ಕು ಯುಗಗಳಲ್ಲಿ ಬೇರೆ ಬೇರೆಯೇ ವೃಕ್ಷಗಳಿದ್ದವು ಎಂಬ ನಂಬಿಕೆ ಇದೆ. ಅಂದರೆ ಕೃತ ಯುಗದಲ್ಲಿ ಕದಂಬ ವೃಕ್ಷ, ತ್ರೇತಾ ಯುಗದಲ್ಲಿ ಬಿಲ್ವ ವೃಕ್ಷ, ದ್ವಾಪರ ಯುಗದಲ್ಲಿ ಬಕುಳ ವೃಕ್ಷ ಹಾಗೂ ಕಲಿಯುಗದಲ್ಲಿ ಬೇವು ವೃಕ್ಷ ಇಲ್ಲಿದೆ.
ಇಲ್ಲಿನ ಸಿದ್ಧಾಮೃತ ಕೊಳವು ಆಕರ್ಷಕವಾಗಿದೆ. ಕೃತಯುಗದಲ್ಲಿ ಕಾಮಧೇನುವು ಇಲ್ಲಿಗೆ ಬಂದು ಶಿವ ಲಿಂಗಕ್ಕೆ ಕ್ಷೀರಾಭಿಷೇಕ ಮಾಡಿದ್ದು, ಉಕ್ಕಿ ಹರಿದ ಹಾಲು ಕೊಳವನ್ನು ತುಂಬಿತು, ಈ ಮೂಲಕ ಕೊಳಕ್ಕೆ ದೈವೀಕ ಶಕ್ತಿ ನೀಡಿತು ಎಂಬ ನಂಬಿಕೆಯಿದೆ. ದುಷ್ಟಶಕ್ತಿಗಳ ಬಾಧೆಗೀಡಾದ ವ್ಯಕ್ತಿಗಳು ಈ ಪವಿತ್ರ ಕೊಳದಲ್ಲಿ ಸ್ನಾನ ಮಾಡಿದರೆ, ಬಾಧೆ ನಿವಾರಣೆಯಾಗುತ್ತದೆ. ಅಲ್ಲದೆ, ವಿಶೇಷವೆಂದರೆ ಈ ಕೊಳದಲ್ಲಿ ಕಪ್ಪೆಗಳಿಲ್ಲ ಮತ್ತು ನೀರು ಹಾವುಗಳೂ ಇಲ್ಲ. ಇದಕ್ಕೆ ಕಾರಣ, ಋಷಿಯೊಬ್ಬ ತಮ್ಮ ತಪೋಬಲದ ಮೂಲಕ ಅವುಗಳು ಈ ಕೊಳದಲ್ಲಿ ಇರದಂತೆ ಮಾಡಿದ್ದ ಎನ್ನಲಾಗುತ್ತದೆ.
ಈ ಕ್ಷೇತ್ರವನ್ನು ಪುಳ್ಳಿರುಕ್ವೇಲೂರು ಅಂತಲೂ ಕರೆಯಲಾಗುತ್ತದೆ. ಇದಕ್ಕೆ ಕಾರಣ ಇಲ್ಲಿನ ದೇವರನ್ನು ಪುಳ್ (ಪಕ್ಷಿ-ಜಟಾಯು), ಋಗ್ವೇದ (ರುಕ್), ಮುರುಗನ ಆಯುಧ (ವೇಲ್) ಮತ್ತು ಸೂರ್ಯ (ಊರ್) ಪೂಜಿಸಿದ್ದಾರೆ.
ವೈದ್ಯನಾಥ ಸ್ವಾಮಿಯಲ್ಲದೆ, ಈ ಕ್ಷೇತ್ರವು ನಾಡಿ ಜ್ಯೋತಿಷ್ಯಕ್ಕೂ ಅತ್ಯಂತ ಪ್ರಸಿದ್ಧಿ ಪಡೆದಿದೆ. ತಾಳೆ ಗ್ರಂಥಗಳ ಮೂಲಕ ವ್ಯಕ್ತಿಯೊಬ್ಬನ ಭೂತ, ವರ್ತಮಾನ ಮತ್ತು ಭವಿಷ್ಯಗಳನ್ನು ತಿಳಿಯಬಲ್ಲ ಈ ಶಾಸ್ತ್ರದಲ್ಲಿ ಕೇವಲ ಹೆಬ್ಬೆರಳ ಮುದ್ರೆಯ ಮೂಲಕ ಭವಿಷ್ಯ ನುಡಿಯಲಾಗುತ್ತದೆ. ಪಟ್ಟಣದ ಅಲ್ಲಲ್ಲಿ ನಾಡಿಜ್ಯೋತಿಷ್ಯ ಕೇಂದ್ರಗಳನ್ನು ನಾವು ಕಾಣಬಹುದಾಗಿದೆ.
ವೈದ್ಯೇಶ್ವರ ದೇವಾಲಯಕ್ಕೆ ಹೋಗುವುದು ಹೇಗೆ:
ರೈಲು ಮೂಲಕ : ಚೆನ್ನೈ-ತಂಜಾವೂರು ಮಾರ್ಗ ಮಧ್ಯೆ ವೈದ್ಯೇಶ್ವರ ಕೋವಿಲ್ (ದೇವಸ್ಥಾನ) ರೈಲ್ವೈ ನಿಲ್ದಾಣವಿದೆ.
ರಸ್ತೆ ಮಾರ್ಗ: ಇದು ಚೆನ್ನೈಯಿಂದ 235 ಕಿ.ಮೀ. ದೂರದಲ್ಲಿರುವ ಚಿದಂಬರಂನಿಂದ 26 ಕಿ.ಮೀ. ದೂರವಿದೆ.ಚಿದಂಬರಂನಿಂದ 35-40 ನಿಮಿಷದಲ್ಲಿ ದೇವಸ್ಥಾನ ತಲುಪಬಹುದು.
ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಚೆನ್ನೈ. ಚೆನ್ನೈಯಿಂದ ರಸ್ತೆ ಅಥವಾ ರೈಲು ಮೂಲಕ ಕ್ಷೇತ್ರ ತಲುಪಬಹುದು. ತಿರುಚ್ಚಿಯಿಂದಲೂ ಹೋಗಬಹುದು. ಆದರೆ ರಸ್ತೆ ಪ್ರಯಾಣ ಮಾತ್ರ ತ್ರಾಸದಾಯಕ.

No comments:
Post a Comment